Monday, July 21, 2014

ಉಳಿದವರು ಕಂಡಂತಾ ತಾರೆಯರ " ಬಿಗ್ ಬಾಸ್"...


ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆ, ತಮ್ಮ ಮನಸ್ತಾಪಗಳು, ಭಾವನೆಗಳನ್ನು ಮುಚ್ಚು ಮರೆಯಿಲ್ಲದೆ ವ್ಯಕ್ತಪಡಿಸಲು ಎಲ್ಲರೂ ಹಾತೊರೆಯುವಂತೆ ಕಾಣುತ್ತಿತ್ತು.
ಇದಕ್ಕೆ ಅನುಗುಣವಾಗಿ ಬಿಗ್ ಬಾಸ್ ಎಲ್ಲರಿಗೂ ತಮಗೆ ಉಳಿದವರ ಮೇಲಿರುವ ದೂರುಗಳನ್ನು ಬರೆಯಲು ಅವಕಾಶ ಕೊಟ್ಟು, ಅದನ್ನು ಕ್ಯಾಪ್ಟನ್ ಆದ ಅಕುಲ್ ಓದುವಂತೆ ಆಗ್ರಹಿಸಿದರು. ಆರೋಪಿಯನ್ನು ಕಟಕಟೆಗೆ ಕರೆದು ನಂತರ ಆರೋಪ ಮಾಡಿದವರನ್ನು ಇನ್ನೊಂದು ಕಟಕಟೆಯಲ್ಲಿ ನಿಲ್ಲಿಸಿ , ಪ್ರಶ್ನೋತ್ತರ ರೀತಿಯಲ್ಲಿ ನಡೆಸಲಾಯಿತು. 


ಮೊದಲನೇ ಆರೋಪಿಯಾಗಿ ಶ್ವೇತಾ ಅವರನ್ನು ಕರೆಯಲಾಯಿತು. ನಂತರ ನೀತು, ಅನುಪಮಾ ಮತ್ತು ಆದಿಯವರ ಮೇಲಿದ್ದ ಆರೋಪಗಳ ಬಾಗೆ ಚರ್ಚಿಸಲಾಯಿತು. ಮಯೂರ್ ತಮ್ಮನ್ನು ಮಾತನಾಡಿಸದೇ ಇರುವ ಆದಿಯ ಬಗ್ಗೆ ಸ್ವಲ್ಪ ಅಸಮಾಧಾನ ತೋರಿದರು. ನೀತು ಇವರಿಬ್ಬರ ನಡುವೆ ರಾಜಿ ಮಾಡಿಸುವ ಯತ್ನ ಮಾಡಿ ಹಲವು ಬಾರಿ ವಿಫಲರಾದರು. ದಿನದಂತ್ಯಕ್ಕೆ ಆದಿ ಮಯೂರ್ ಅನ್ನು ತಬ್ಬಿಕೊಂಡು ತಮ್ಮ ಸ್ನೇಹಕ್ಕೆ ಬೆಲೆ ಕೊಟ್ಟು ಪ್ರೀತಿಯ ಸ್ನೇಹಿತ ಮಯೂರ್ ಕೆನ್ನೆಗೆ ಮುತ್ತು ನೀಡಿ ಕ್ಷಮೆಯಾಚಿಸಿದರು.

ಸೃಜನ್ ಎಂದಿನಂತೆ ಎಲ್ಲರ ಅನುಕರಣೆ ಮಾಡಿ ಮನ ಗೆದ್ದರು. ಈ ವಾರ ಬಿಗ್ ಬಾಸ್ ಮನೆಯನ್ನು ಬಿಟ್ಟು ಹೋಗುವ ಸರದಿ ಶಕೀಲಾ ಅವರದಾಗಿತ್ತು. ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ಚೆಚಿ , RJ  ರೋಹಿತ್ ತಮಗೆ ತುಂಬಾ ಹಿಡಿಸುತ್ತಾರೆ, ಏಕೆಂದರೆ ಅವರು ನನ್ನನ್ನು ಅಕ್ಕಎಂದು ಮೊದಲು ಕರೆಯಲಿಲ್ಲ. ಆದರೆ, ನಂತರ ಅಕ್ಕ ಎಂದರೆ ನೀವು ಎಲ್ಲೇ ಇದ್ದರೂ , ನಿಮ್ಮ ಕಾಳಜಿ ವಹಿಸಬೇಕು ಇಲ್ಲದಿದ್ದರೆ ಅಕ್ಕ ಎಂದು ಕರೆಯುವಲ್ಲಿ ಏನು ಅರ್ಥವಿಲ್ಲ ಎಂದು ಹೇಳಿದಾಗ ನಮಗೆಲ್ಲಾ RJ ರೋಹಿತ್ ತುಂಬಾ ಹತ್ತಿರವಾದರು ಎಂದು ಭಾವಿಸುತ್ತೀವಿ.


ಸಕ್ಕತ್ ಸನ್‌ಡೇ ವಿತ್ ಸುದೀಪ್ ನ ವೇದಿಕೆಗೆ ಆಗಮಿಸಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತೆ, ಖ್ಯಾತ ನಟಿ ತಾರಾ. ಅವರು ಕನ್ನಡ ಚಿತ್ರರಂಗದ ಎಲ್ಲ ದಿಗ್ಗಜರ ಜೊತೆ ಅಭಿನಯಿದ್ದಾರೆ. ಮೂರು ತಲೆಮಾರುಗಳ ನಾಯಕರ ಜೊತೆಯಲ್ಲಿ ಇವರು ನಟಿಸಿ ಹಲವಾರು ಪ್ರಶಸ್ತಿ ಮತ್ತು ಪ್ರಶಂಸೆ ಇವರದು. 
ಅವರಲ್ಲಿ ಇರುವ ಕಾಯಕ ಭಕ್ತಿಯನ್ನು ನಮ್ಮ ಮುಂದಿಟ್ಟ ಸುದೀಪ್, ಅಂಬರೀಷ್ ಅವರ ಮಾತನಾಡುವ ಶೈಲಿ ಅನುಸರಿಸಿದಾಗ, ತಾರಾ ಅವರಿಗೂ ಕೂಡ ನಗು ತಡೆಯಲು ಆಗಲಿಲ್ಲ. ತಮ್ಮ ಮಗುವಿನ ಬಗ್ಗೆ ಮಾತನಾಡಲು ಕೇಳಿದಾಗ ಭಾವುಕರಾದ ತಾರಾ, ಅಂತ್ಯದಲ್ಲಿ ಅವರಿಗೆ ತುಂಬಾ ಹೆಸರು ತಂದುಕೊಟ್ಟ ರಣರಂಗ ಚಿತ್ರಗೀತೆಗೆ ಹೆಜ್ಜೆಇಟ್ಟು ರಂಜಿಸಿದರು.



ಸಕ್ಕತ್ ಸನ್‌ಡೇಯ ರಂಗು ಹೆಚ್ಚಿಸಲು ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಮತ್ತು "ಉಳಿದವರು ಕಂಡಂತೆ" ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವೇದಿಕೆ ಮೇಲಿದ್ದರು.
ಹುಲಿವೇಷ ಕುಣಿತಕ್ಕೆ ರಿಚಿ ಗೇಟ್ಅಪ್ನಲ್ಲಿ ಕುಣಿದ ರಕ್ಷಿತ್ ಗೆ ಸುದೀಪ್ ಕೂಡ ಸಾಥ್ ಕೊಟ್ಟರು. ಅಜನೀಶ್ ಮತ್ತು ರಕ್ಷಿತ್ ಇಬ್ಬರು ಸೇರಿ ಹಾಡು ಹೇಳಿ, ಅವರು ನಡೆದು ಬಂದ ಹಾದಿ ಮತ್ತು ಈಗ ಅವರಿಗೆ ಲಭಿಸಿರುವ ಸ್ಥಾನ ಮಾನಗಳ ವಿಚಾರ ವಿನಿಮಯ ಮಾಡಿಕೊಂಡರು. 

ಮತ್ತೊಂದು ಭರ್ಜರಿ ಭಾನುವಾರಕ್ಕೆ ಕಾಯುವ ಸಮಯ ವೀಕ್ಷಕರದ್ದು.

ಪುರುಷೋತ್ತಮರ ಸಕ್ಕತ್ ಸನ್‌ಡೇ...

ಮೊದಲನೇ ವಾರದ ಅತಿಥಿಯಾಗಿ ರವಿಚಂದ್ರನ್ ನಮ್ಮ ಮನಸ್ಸು ಗೆದ್ದರು. ಎರಡನೇ ವಾರಾಂತ್ಯಕ್ಕೆ ನಮ್ಮ ವೇದಿಕೆ ಮೇಲೆ ನಮ್ಮ ಮೈಸೂರಿನ ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್ ಆಗಮಿಸಿದರು. ಹಾಡಿನ ಮೂಲಕ ಎಂಟ್ರೀ ಕೊಟ್ಟ ಪ್ರಕಾಶ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡು, ತಾವು ನಡೆದು ಬಂದ ಹಾದಿಯನ್ನು ಹಂಚಿಕೊಂಡರು.

ಶರೀರಕ್ಕೆ ತಕ್ಕ ಶಾರೀರ, ತಮ್ಮ ನಟನೆಯಿಂದ ಎಲ್ಲರನ್ನು ಬೆರೆಗುಗೊಳಿಸುವ ದಕ್ಷಿಣ ಭಾರತದ ನಟ ರವಿ ಶಂಕರ್ ವೇದಿಕೆಗೆ ಕೆಂಪೇಗೌಡ ಚಿತ್ರದ ಸಂಭಾಷಣೆಯೊಂದಿಗೆ ಕಾಲಿಟ್ಟಾಗ ಪ್ರೇಕ್ಷಕರಿಗೆ ಆಗಿದ ಅನುಭವಕ್ಕೆ "ರೋಮಾಂಚನ" ಎಂದರೆ ತಪ್ಪೇನಾಗುವುದಿಲ್ಲ. ರವಿಶಂಕರ್ ಕಂಠದಾನ ಕಾಲವಿದರಾಗಿ ಹಲವಾರು ಪ್ರಶಸ್ತಿ ಪಡೆದಿರುವ ಬಗ್ಗೆ ನಮಗೆಲ್ಲಾ ತಿಳಿದಿದೆ. ಆದರೆ, ಅವರು ಒಬ್ಬ ಗಾಯಕನು ಹೌದೆಂದು ನಿರೂಪಿಸಿದಾಗ ವೇದಿಕೆ ಅದಕ್ಕೆ ಸಾಕ್ಷಿಯಾಗಿತ್ತು. ಚಂದನದ ಗೊಂಬೆ ಚಲನಚಿತ್ರದ ಹಾಡೊಂದನ್ನು ಹಾಡಿದಾಗ ಎಲ್ಲರೂ ಆಶ್ಚರ್ಯ ವ್ಯಕ್ತವಾದರೆ, ವಿಜಯ್ ಪ್ರಕಾಶ್ ಜೊತೆ ಕೂಡಿ ತಮ್ಮ ಗುರುಗಳ ತಿಲ್ಲಾನ ಹಾಡಿದಾಗ ಅವರ ಧೈತ್ಯ ಪ್ರತಿಭೆ ಅನಾವರಣಗೊಂಡಿತು. 


ಮನೆಯೊಳಗೆ ಸಂತೋಷ್  RJ ರೋಹಿತ್ ಬಗ್ಗೆ ಮೆಚ್ಚುಗೆಯ ಮಾತನಾಡಿದಾಗ, ಎಲ್ಲೋ ಒಂದು ಕಡೆ ಮನಸ್ತಾಪಗಳು ಕಡಿಮೆ ಆಗುತ್ತಿರುವ ಲಕ್ಷಣಗಳು ಕಂಡವು. ನಾಯಕ ಆದಿ, ರೋಹಿತ್ ಹೆಸರನ್ನು ನೇರವಾಗಿ ನಾಮಿನೇಟ್ ಮಾಡಿದ್ದಕ್ಕೆ ರೋಹಿತ್ ಆಕ್ಷೇಪ ವ್ಯಕ್ತಪಡಿಸಿದರು.  
ಸೃಜನ್ ಎಂದಿನಂತೆ ಎಲ್ಲರನ್ನೂ ಅನುಕರಣೆ ಮಾಡಿ ನಗಿಸುತ್ತಿದರು. Commando ಟಾಸ್ಕ್ ಗೆ ರೋಹಿತ್ ಅನ್ನು ನಾಯಕನಾಗಿ ನೇಮಕ ಮಾಡಿದ ಬಿಗ್ ಬಾಸ್. ನಂತರ ಬಂಡಾಯ ಪಡೆಯ ನಾಯಕಿಯಾಗಿ ನೀತು ಅನ್ನು ನೇಮಿಸಿದರು. 

ರೋಹಿತ್ ಮಾತು ಮೀರಿದಕ್ಕೆ ಸಂತೋಷ್ ಅವರಿಗೆ "ಕಮ್ಯಾಂಡರ್ ರೋಹಿತ್ ಗೆ ಜೈ" ಎಂದು ೨೦ ರೌಂಡ್ ಸುತ್ತುಹಾಕುವ ಶಿಕ್ಷೆ ಲಭಿಸಿತು. ಆದಿ ಮತ್ತು ಮಯೂರ್ ನಡುವೆ ಭಿನ್ನಾಭಿಪ್ರಾಯ ಶುರುವಾಯಿತು. ಎರಡು ಬಾರಿ ನಾಮಿನೇಟ್ ಆದರೂ ಸೇಫ್ ಆಗಿರುವುದು ದೊಡ್ಡ ಸಾಧನೆ ಎಂದು ಮಯೂರ್ ರೋಹಿತ್ ಗೆ ಹುರಿದುಂಬಿಸಿದರು. 

ಆದಿಯ ನಾಯಕತ್ವ ಮುಗಿದಾದ ನಂತರ ಅಕುಲ್ ಅವರನ್ನು ನಾಯಕನಾಗಿ ನೇಮಕ ಮಾಡಿದರು. ನೂತನ ನಾಯಕ ಅಕುಲ್ ಅವರನ್ನು ರಂಜಿಸಲು ಮನೆಯ ಉಳಿದವರಿಗೆ ಬಿಗ್ ಬಾಸ್ ಆದೇಶ ಮಾಡಿದರು. ದೀಪಿಕಾ ನೃತ್ಯದ ಮೂಲಕ ಮನೋರಂಜನೆಗೆ ನಾಂದಿ ಆಡಿದರೆ, ಉಳಿದವರು ಒಂದು ಕಿರು ನಾಟಕದಿಂದ ಹಾಸ್ಯದ ಹೊನಲು ಸೃಷ್ಟಿಸಿದರು. ಶ್ವೇತಾ ಮತ್ತು ಅನುಪಮಾ ಮಾಡಿದ ಮೋಹಕ ನೃತ್ಯದಿಂದ ಮುಕ್ತಾಯ ಮಾಡಲಾಯಿತು. 

Friday, July 18, 2014

ಮೊದಲೆರಡು ವಾರದ ಹೈಲೈಟ್ಸ್...

ಮನೋರಂಜನಾ ಭರಿತ ರಿಯಾಲಿಟೀ ಶೋ ಬಿಗ್ ಬಾಸ್ ಸೀಸನ್ ೨ , 14 ವಾರಗಳ ಪಯಣದಲ್ಲಿ 2 ವಾರ ಹತ್ತಿರವಾಗಿದೆ.
ಮನೆಯ ಒಳಗೆ ನಮ್ಮನ್ನೆಲ್ಲಾ ನಗಿಸಲು ಸೃಜನ್ ಮತ್ತು ಲಯ ಇದ್ದರೆ, ಮನೆಯಲ್ಲಿ ಮುಗ್ಧತೆ ಕೊರತೆಯನ್ನು ತುಂಬಲು ಅನುಪಮಾ ಮತ್ತು ಹರ್ಷಿಕಾ ಇದ್ದಾರೆ. ಹಿರಿಯರಾಗಿ ಲಯ ಮತ್ತು ಶಕೀಲಾ ಉಳಿದವರಿಗೆ ಮಾರ್ಗದರ್ಶಕರಾಗಿದ್ದಾರೆ. ಬಿಗ್ ಬಾಸ್ ಶಕೀಲಾರವರನ್ನು ಕ್ಯಾಪ್ಟನ್ ಸ್ಥಾನಕ್ಕೆ ಇಬ್ಬರನ್ನು ನೇಮಿಸಲು ಹೇಳಿದಾಗ, ಅವರು ಸೃಜನ್ ಮತ್ತು ಹರ್ಷಿಕಾರ ಹೆಸರು ಸೂಚಿಸುತ್ತಾರೆ.


ಹೆಚ್ಚು ಮತಗಳಿಂದ ಸೃಜನ್ ಕ್ಯಾಪ್ಟನ್ ಆಗಿ ನೇಮಕಗೊಳ್ಳುತ್ತಾರೆ. ಅವರಿಗೆ ಮನೆಯ ಮಂದಿ ಎಲ್ಲಾ ಕೆಲಸ ಮತ್ತು ಟಾಸ್ಕ್ ಗಳಲ್ಲಿ ಸರಿಯಾಗಿ ಭಾಗವಹಿಸುವ ಬಗ್ಗೆ ಗಮನ ಹರಿಸಬೇಕುವ ಜವಾಬ್ದಾರಿಯನ್ನು ಬಿಗ್ ಬಾಸ್ ವಹಿಸುತ್ತಾರೆ.

ತುಲಾ ಭಾರದ ಟಾಸ್ಕ್ ಅಲ್ಲಿ ಶ್ವೇತಾಗೆ ಸ್ವಲ್ಪ ಏಟಾಗಿ , ನಂತರ ಚೇತರಿಸಿಕೊಳ್ಳುತ್ತಾರೆ. ಈ ಟಾಸ್ಕ್ ಅಲ್ಲಿ ನೀತು ಮತ್ತು ಅಕುಲ್ ಅವರ ಮಧ್ಯೆ ಸ್ವಲ್ಪ ಮನಸ್ತಾಪ ಉಂಟಾಗುತ್ತದೆ.   ಶಕೀಲಾರವರಿಗೆ ಕನ್ನಡ ಕಲಿಸುವ ಹೊಣೆಯನ್ನು ಅಕುಲ್ ಗೆ ಹೊರಿಸುತ್ತಾರೆ.

ಎಷ್ಟೇ ಮನಸ್ತಾಪ ಇದ್ದರೂ, ಒಬ್ಬರು ಇನ್ನೊಬ್ಬರ ಭಾವನೆಗೆ ಧಕ್ಕೆ ತರದೆ ಹೊಂದುಕೊಂಡು ಹೋಗುತ್ತಿದ್ದಾರೆ. ಶಕೀಲಾ ತಮ್ಮ ಹಿಂದಿನ ದಿನಗಳನ್ನು ಮೆಲುಕು ಹಾಕಿದ ಮೇಲೆ, ಅನಿತಾ ಮತ್ತು ಇತರರ ಕಣ್ಣಲ್ಲಿ ನೀರು ತುಂಬುತ್ತದೆ.
ನಂಬರ್ ಗೇಮ್ ಅಲ್ಲಿ ಮೊದಲನೇ ಸ್ಥಾನದಲ್ಲಿ ಶಕೀಲಾ ನಿಂತಿರುವುದ್ದಕ್ಕೆ ಯಾರು ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಎರಡನೇ ಸ್ಥಾನದಲ್ಲಿ ಲಯರವರು ನಿಂತಿರುವುದ್ದಕ್ಕೆ ನೀತು ತುಂಬಾ ಪ್ರಶ್ನಿಸುತ್ತಾರೆ.

ಇದಾದ ನಂತರ ಅಕುಲ್, ಅನಿತಾ ಮತ್ತು ಇತರರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಸದಾ ನಗಿಸುವ ಸೃಜನ್ ತಮ್ಮ ತಂದೆಯ ಬಗ್ಗೆ ಮಾತನಾಡುವಾಗ ಭಾವೋದ್ವೇಗಗೊಳಗಾಗುತ್ತಾರೆ. ಸ್ಪರ್ಧಿಗಳು ಆಂಗ್ಲ ಭಾಷೆ ಹೆಚ್ಚು ಉಪಯೋಗಿಸಿದಕ್ಕೆ ಮತ್ತು ನಿಯಮಗಳನ್ನು ಮೀರಿದಕ್ಕೆ ಸೃಜನ್ ಪಂಜರದೊಳಗೆ ಇರುವಂತೆ ಬಿಗ್ ಬಾಸ್ ಶಿಕ್ಷೆ ನೀಡುತ್ತಾರೆ.
ಅನಿತಾರವರು ಹೇಳಿಕೊಳ್ಳಲಾಗದ ತಮ್ಮ ಕೆಲವು ವಿಷಯಗಳನ್ನು ಶಕೀಲಾ ಹತ್ತಿರ ಹೇಳುವ ವ್ಯರ್ಥ ಪ್ರಯತ್ನ ಮಾಡಿ, ಆನಂತರ ಮಲಗುವ ವೇಳೆ ತಮಗೆ ಹದಿನಾರು ವರ್ಷದ ಹೆಣ್ಣು ಮಗಳಿರುವುದಾಗಿ ಹೇಳುತ್ತಾರೆ.


ಈ ಬಾರಿ ಮೊದಲನೇಯವರಾಗಿ ಅನಿತಾರವರು ಬಿಗ್ ಬಾಸ್ ಮನೆಯಿಂದ ಹೊರನಡೆಯುತ್ತಾರೆ.  "ಸಕ್ಕತ್ ಸನ್‌ಡೇ ವಿತ್ ಸುದೀಪ್"ನ ವೇದಿಕೆಯಲ್ಲಿ ನಮ್ಮ ನಿಮ್ಮೆಲ್ಲರ ಮೆಚ್ಚಿನ Crazy Star ರವಿಚಂದ್ರನ್ ಮೊದಲನೇ ಬಾರಿಗೆ ತಮ್ಮ ಸುಖ- ದುಃಖಗಳನ್ನು ಹಂಚಿಕೊಂಡಿದ್ದಾರೆ. ಅವಕಾಶ ಸಿಕ್ಕಿದಲ್ಲಿ ತಮ್ಮ ತಂದೆಯ ಸಾವನ್ನು ಅಳಿಸಿ ಅವರನ್ನು ಮರಳಿ ಕರೆತರುವುದಾಗಿ ಹೇಳಿದ ಕ್ಷಣ ಮರೆಯಲು ಅಸಾಧ್ಯ.


ಎರಡನೇ ವಾರದ ಪ್ರಾರಂಭದಲ್ಲಿ ಸೃಜನ್ ಅವರು ಹರ್ಷಿಕಾರನ್ನು ನೇರವಾಗಿ ನಾಮಿನೇಟ್ ಮಾಡಿದಾಗ, ಹರ್ಷಿಕಾ ಸ್ವಲ್ಪ ಭಾವುಕರಾದರು. RJ ರೋಹಿತ್ ಎಲ್ಲರ ಪಾತ್ರೆ ತೊಳೆಯುವ ಶಿಕ್ಷೆಯಿಂದ ಸ್ವಲ್ಪ ಅಸಮಾಧಾನವಾಗಿದ್ದರು. ಬೇರೆಯವರ ಜೊತೆ ಹೊಂದಿಕೊಳಲ್ಲು ಅವರಿಗೆ ಕಷ್ಟವಾಗುತ್ತಿರುವಂತೆ ಕಾಣುತ್ತಿತ್ತು. 

ಅದೃಷ್ಟ - ನತದೃಷ್ಟರ ಟಾಸ್ಕ್‌ನಲ್ಲಿ ಆದಿ ಮುನ್ನಡೆಸಿದ ತಂಡ ಗೆಲುವು ಸಾದಿಸಿದರು. ಈ ಟಾಸ್ಕ್ ನಡೆಯುವ ವೇಳೆ ಆದಿ ತಂಡದವರಿಗೆ ಬಹಳಷ್ಟು ಬಾರಿ ಪೆಟ್ಟಾಯಿತು. 
ಅಕುಲ್ ಟಾಸ್ಕ್ ಆಡಬೇಕಾದರೆ ಕೆಲವೊಮ್ಮೆ ತಮ್ಮ ಶಕ್ತಿ ಪ್ರದರ್ಶಿಸಿದರೆಂದು ಆದಿ ತಂಡದವರು ದೂಷಿಸಿದರು. 

ವಾರದ ಕಡೆಯಲ್ಲಿ ನಾಯಕನ ಬದಲಾವಣೆ ಮಾಡಲಾಯಿತು. ನೂತನ ನಾಯಕನಾಗಿ ಆದಿಯವರನ್ನು ಮನೆಯ ಸದಸ್ಯರು ನೇಮಕ ಮಾಡಿದರು. ಹೆಚ್ಚಾಗಿ ಆಂಗ್ಲ ಭಾಷೆಯಲ್ಲಿ ವ್ಯವಹರಿಸಿದ ಪರಿಣಾಮವಾಗಿ ಸಂತೋಷ್ ಮತ್ತು ದೀಪಿಕಾಗೆ ಶಿಕ್ಷೆ ನೀಡಲಾಯಿತು. 

ಲಯ ಅವರ ಪ್ರೇಮ ಪ್ರಸಂಗ ತುಂಬಾ ಮುದನೀಡಿತು. ಅವರಿಗೆ ಹೊಸ ಕೇಶ ವಿನ್ಯಾಸ ಮಾಡಿದ ದೀಪಿಕಾ ಅವರನ್ನೇ , ಲಯ ತಮ್ಮ ಪ್ರಣಯ ಸಂಜೆಗೆ ಆಯ್ಕೆ ಮಾಡಿಕೊಂಡರು. ಮನೆಯ ಎಲ್ಲ ಸದಸ್ಯರು ಲಯ ಅವರನ್ನು ಬಹಳಷ್ಟು ಪ್ರೋತ್ಸಾಹಿಸಿದರು. ಲಯ ತಮ್ಮ ಮಾತಿನ ಶೈಲಿಯಲ್ಲೇ ಎಲ್ಲರನ್ನೂ ನಗಿಸಿದರು. ಅಕುಲ್ ಸುದೀಪ್ ಅವರನ್ನು ಅನುಕರಿಸಿದರೆ, ಸೃಜನ್ ಮನೆಯ ಸದಸ್ಯರನ್ನು ಅನುಕರಣೆ ಮಾಡಿ ಬಿಗ್ ಬಾಸ್ ಮನೆಯ ಮರೆಯಲಾಗದ ಹಾಸ್ಯ ಸನ್ನಿವೇಶ ಸೃಷ್ಟಿಸಿದರು.

Tuesday, July 1, 2014

ಬಿಗ್ ಬಾಸ್ - 2ರ ಸಂಕ್ಷೀಪ ನೋಟ..


ಕನ್ನಡ ಕಿರುತೆರೆಯ ಅತೀದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 2' 'ತಮಾಷೇನೆ ಅಲ್ಲ' ಎಂಬ ಘೋಷವಾಣಿಯೊಂದಿಗೆ ಸುವರ್ಣ ಟಿವಿ ಚಾನಲ್ ನಲ್ಲಿ ಜೂ.29ರಿಂದ ಅಧ್ಯಾಯ ಆರಂಭಿಸಿದೆ. ರಿಯಾಲಿಟಿ ಶೋನಲ್ಲಿ ಅವರಿರ್ತಾರೆ ಇವರಿರ್ತಾರೆ ಎಂಬ ಊಹಾಪೋಹಕ್ಕೆ ತೆರೆ ಎಳೆಯಲಾಗಿದ್ದು ವಿಭಿನ್ನ ವ್ಯಕ್ತಿತ್ವದ ಒಟ್ಟು 14 ಸ್ಪರ್ಧಿಗಳು ಬಿಗ್ ಬಾಸ್ ಮನೆಯನ್ನು ಬಲಗಾಲಿಟ್ಟು ಪ್ರವೇಶಿಸಿದ್ದಾರೆ. ಅವರು ಬಿಗ್ ಬಾಸ್ ಮನೆ ಪ್ರವೇಶಿಸುವ ಮೊದಲು ಈ ರಿಯಾಲಿಟಿ ಶೋ ಕೋಟ್ಯಂತರ ಕನ್ನಡ ಪ್ರೇಮಿಗಳ ಮನೆಯನ್ನು ಪ್ರವೇಶಿಸಿ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಸೀಸನ್ 2ರ ನಿರೂಪಣೆಯ ಜವಾಬ್ದಾರಿಯನ್ನೂ ಹೊತ್ತಿರುವ ನಿಮ್ಮ ನೆಚ್ಚಿನ 'ಕಿಚ್ಚ' ಸುದೀಪ್ ತಮ್ಮ ವಿಶಿಷ್ಟ ಶೈಲಿಯಲ್ಲಿ ಎಲ್ಲ ಹದಿನಾಲ್ಕು ಸ್ಪರ್ಧಿಗಳ ಪರಿಚಯ ಮಾಡಿಸಿಕೊಟ್ಟಿದ್ದಾರೆ. ಮುಖವಾಡ ಹೊತ್ತು ವಿಭಿನ್ನ ರೀತಿಯಲ್ಲಿ ಎಂಟ್ರಿ ತೆಗೆದುಕೊಂಡ ಸುದೀಪ್, ಬಿಗ್ ಬಾಸ್ ಮನೆಯಲ್ಲಿರುವ, 50 ಲಕ್ಷ ರೂ. ಬಹುಮಾನ ಗೆಲ್ಲುವ ಸ್ಪರ್ಧೆಗಿಳಿದಿರುವ ಸ್ಪರ್ಧಿಗಳ 'ಅಸಲಿ' ಮುಖವಾಡವನ್ನೂ ಬಿಗ್ ಬಾಸ್ ಅನಾವರಣ ಮಾಡಲಿದ್ದಾರೆ ಎಂಬುದರ ಸೂಚನೆಯನ್ನು ನೀಡಿದ್ದಾರೆ.



ಸತತ 99 ವಾರಗಳ ಕಾಲ, ಯಾವುದೇ ಹೊರಜಗತ್ತಿನ ಸಂಪರ್ಕವೂ ಇಲ್ಲದೆ, ಸ್ಪರ್ಧಿಗಳು ಬಿಗ್ ಬಾಸ್ ಒಡ್ಡುವ ನಾನಾ ಪರೀಕ್ಷೆಗೆ ಒಡ್ಡಿಕೊಳ್ಳಲಿದ್ದಾರೆ. ಅಲ್ಲಿ ಯಾರು ಗೆಲ್ಲುತ್ತಾರೋ, ಯಾರು ಪ್ರತಿ ಶನಿವಾರ ಮನೆಯಿಂದ ಆಚೆ ಬರುತ್ತಾರೋ ಯಾರು ಬಲ್ಲರು? ಅಲ್ಲಿ ಮಾತಿನ ಕಾದಾಟವಿರಲಿದೆ, ಕ್ಲಿಷ್ಟಕರ ಟಾಸ್ಕ್ ಗಳಿಗೆ ಒಡ್ಡಿಕೊಳ್ಳಬೇಕಿದೆ, ಕುಟುಂಬವನ್ನು ಬಿಟ್ಟುಬಂದಿದ್ದೇನೆ ಎಂಬ ಭಾವುಕತೆಯನ್ನು ಮೆಟ್ಟಿ ಗಟ್ಟಿತನ ಪ್ರದರ್ಶಿಸಬೇಕಿದೆ. ಆದರೆ, ದೈಹಿಕವಾಗಿ ಅಲ್ಲ, ಯಾರು ಮನಸ್ಸಿನ ಯುದ್ಧವನ್ನು ಗೆಲ್ಲುತ್ತಾರೋ ಅವರೇ ವಿಜಯಿಶಾಲಿಯಾಗಲಿದ್ದಾರೆ.

ಬಿಗ್ ಬಾಸ್ ಸೀಸನ್ 2 ಅಂದ್ರೆ ತಾಮಾಷೇನೆ ಅಲ್ಲರೀ! ಬಿಗ್ ಬಾಸ್ ಮನೆಯಲ್ಲಿ ನಗುವಿರಲಿದೆ, ಅಳುವಿರಲಿದೆ, ಮಾತಿನ ಚಕಮಕಿ ನಡೆಯಲಿದೆ, ವ್ಯಕ್ತಿತ್ವಗಳ ಘರ್ಷಣೆ ನಡೆಯಲಿದೆ, ಬಿಗುಮಾನದ ಮುಖವಾಡ ಕಳಚಿ ಬೀಳಲಿದೆ. ತನ್ನನ್ನು ತಾನು ಗೆದ್ದವನು ಎದ್ದ, ಇಲ್ಲದಿದ್ದರೆ ಬಿದ್ದ. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಸುವರ್ಣ ಟಿವಿ ವೀಕ್ಷಕರಿಗೆ ಭರ್ಜರಿ ಮನರಂಜನೆ ಸಿಗಲಿದೆ. ಒಂದಿಬ್ಬರು ಹಿರಿಯರನ್ನು ಹೊರತುಪಡಿಸಿದರೆ ಎಲ್ಲರೂ ಬಿಸಿರಕ್ತದವರು ಮತ್ತು ಮಾತಿನಲ್ಲಿ ಜಾಣರು. ಇನ್ನೇನು ಕೇಳ್ತೀರಿ?

ಬಿಗ್ ಬಾಸ್ ಮನೆಗೆ ಯಾರ್ಯಾರು ಬರುತ್ತಾರೆ ಎಂಬ ಬಗ್ಗೆ ಭಾರೀ ಕುತೂಹಲ ಸೃಷ್ಟಿಯಾಗಿತ್ತು. ನಾನಾ ನಟರ, ನಿರ್ದೇಶಕರ, ಸ್ವಾಮೀಜಿಗಳ ಹೆಸರುಗಳೆಲ್ಲ ಹರಿದಾಡಿದ್ದವು. ಕೊನೆಗೆ ಮನೆಯಲ್ಲಿರಲು ಒಪ್ಪಿಕೊಂಡು ಬಂದಿರುವುದು ಹದಿನಾಲ್ಕು ಸೆಲೆಬ್ರಿಟಿಗಳು. ಮೊದಲನೆಯದಾಗಿ ರಿಯಾಲಿಟಿ ಶೋ ಸೂಪರ್ ಸ್ಟಾರ್ ಎನಿಸಿಕೊಂಡಿರುವ ಅಕುಲ್ ಬಾಲಾಜಿ ಮನೆ ಪ್ರವೇಶಿಸಿದರೆ, ಹದಿನಾಲ್ಕನೆಯವರಾಗಿ ಮಲಯಾಳಂ ನಟಿ ಶಕೀಲಾ ಒಳ ಹೋದರು . ಬನ್ನಿ, ಈಗ ಸುದೀಪ್ ಪರಿಚಯಿಸಿರುವ ಸ್ಪರ್ಧಾಳುಗಳ ಸಂಕ್ಷಿಪ್ತ ಪರಿಚಯ ಮಾಡಿಕೊಳ್ಳೋಣ.

ಅಕುಲ್ ಬಾಲಾಜಿ : 'ಕುಣಿಯೋಣು ಬಾರಾ' ರಿಯಾಲಿಟಿ ಶೋ ಮೂಲಕ ನಿರೂಪಣೆಗೆ ಅಡಿಯಿಟ್ಟವರು ಅಕುಲ್ ಬಾಲಾಜಿ. ನಾನು ಸ್ವಲ್ಪ ಶಾರ್ಟ್ ಟೆಂಪರ್ಡ್ ಅಂತಲೇ ತಮ್ಮನ್ನು ಪರಿಚಯಿಸಿಕೊಂಡಿರುವ ಅಕುಲ್ ಭರತನಾಟ್ಯಂ ಪ್ರವೀಣ, ಲೂಸ್ ಗಳು, ಮೈನಾ, ಮಿಲನ ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ದೀಪಿಕಾ ಕಾಮಯ್ಯ : ಚಿಂಗಾರಿ ಚಿತ್ರದ ಮೂಲಕ ಕನ್ನಡಕ್ಕೆ ಅಡಿಯಿಟ್ಟ ನಟಿ ಕಂ ರೂಪದರ್ಶಿ, ಬೆಂಗಳೂರಿನ ಕುವರಿ ದೀಪಿಕಾ ಕಾಮಯ್ಯ. ಕೆಲ ತಮಿಳು ಚಿತ್ರ ಮತ್ತು ಹಿಂದಿಯ ಫಟಾ ಪೋಸ್ಟರ್ ನಿಕ್ಲಾ ಹೀರೋ ಚಿತ್ರದಲ್ಲಿಯೂ ನಟಿಸಿದ್ದಾರೆ. ಫೆಮಿನಾ ಮಿಸ್ ಇಂಡಿಯಾ ಸೌತ್ ಸ್ಪರ್ಧೆಯಲ್ಲಿಯೂ ಅಂತಿಮ ಹಂತದವರೆಗೆ ಬಂದಿದ್ದ ದೀಪಿಕಾ ಎರಡನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಹೊಕ್ಕಿದ್ದಾರೆ.

ಲಯೇಂದ್ರ : ತೆರೆ ಮೇಲಿಗಿಂತ ಸಂಗೀತ ನಿರ್ದೇಶಕರಾಗಿ ದುಡಿದಿರುವ ಹಿರಿಯ ಕಲಾವಿದ ಲಯೇಂದ್ರ ಅವರು ಕನ್ನಡದ ಖ್ಯಾತ ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅವರ ಸ್ವಂತ ಅಣ್ಣ. ಹೆಂಡತಿ ಜೊತೆ ಪ್ರತಿದಿನ ಆಡುವ ಜಗಳವನ್ನು ತಪ್ಪಿಸಿಕೊಳ್ಳಲು ಬಂದಿದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸಿರುವ ಲಯೇಂದ್ರ ಬಿಗ್ ಬಾಸ್ ಮನೆಯಲ್ಲಿ ಹಾಸ್ಯದ ಹೊನಲು ಹರಿಸ್ತಾರಾ?

ಹರ್ಷಿಕಾ ಪೂಣಚ್ಚ : 'ಪಿಯುಸಿ' ಚಿತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ಮುದ್ದುಮುಖದ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಹಲವಾರು ತಮಿಳು ಚಿತ್ರಗಳಲ್ಲಿ ಅದೃಷ್ಟ ಪರೀಕ್ಷಿಸಿಕೊಂಡು ಬಂದಿದ್ದಾರೆ. ಸರಿಗಮ ಲಿಟ್ಲ್ ಚಾಂಪ್ ನಿರೂಪಕಿಯಾಗಿಯೂ ಗುರಿತಿಸಿಕೊಂಡವರು. ಬಿಗ್ ಬಾಸ್ ನೀಡುವ ಕಠಿಣ ಟಾಸ್ಕ್ ಗಳಿಗೆ ಹರ್ಷಿಕಾ ಹೇಗೆ ಒಡ್ಡಿಕೊಳ್ತಾರೋ ನೋಡೋಣ.

ಸಂತೋಷ್ : ಬಾಕ್ಸ್ ಆಫೀಸಿನಲ್ಲಿ ಅಷ್ಟೇನು ಸದ್ದು ಮಾಡದ 'ನೂರು ಜನ್ಮಕು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ನಟ ಸಂತೋಷ್. ತಮಾಷೆ ಅಂದ್ರೆ ನಟನೆಗೆ ತಮ್ಮನ್ನು ಒಡ್ಡಿಕೊಳ್ಳುವ ಮೊದಲು ಸಂತೋಷ್ ಅವರು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು.

ನೀತೂ ಶೆಟ್ಟಿ : 'ಜೋಕ್ ಫಾಲ್ಸ್' ಎಂಬ ಚಿತ್ರದ ಮೂಲಕ ಅಡಿಯಿಟ್ಟಿದ್ದ ನೀತೂ ಅಪ್ಪಟ ಕನ್ನಡ ಕಲಾವಿದೆ, ಮಂಗಳೂರಿನ ಮಗಳು. 'ಬೇರು' ಎಂಬ ಕಲಾತ್ಮಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನೀತೂ 'ಗಾಳಿಪಟ' ಚಿತ್ರದ ಗಯ್ಯಾಳಿ ಪಾತ್ರದ ಮುಖಾಂತರ ಮನೆಮಾತಾದವರು. ನೀತೂ ಇದ್ದರೆ ನಗುವಿಕೆ ಕೊರತೆಯಿಲ್ಲ, ಆದರೆ, ಅವರ ದಢೂತಿ ದೇಹವನ್ನು ಯಾರಾದರೂ ತಮಾಷೆ ಮಾಡಿದ್ರೆ, ಅಷ್ಟೆ!

ಅನಿತಾ ಭಟ್ : 'ಸೈಕೋ' ಚಿತ್ರ ನೋಡಿದ್ದರೆ ಅನಿತಾ ಭಟ್ ಅವರ ಪ್ರತಿಭೆಯ ಪರಿಚಯ ನಿಮಗಾಗಿರುತ್ತದೆ. ವಿಭಿನ್ನ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಅಷ್ಟೊಂದು ಅವಕಾಶಗಳು ಬರದಿದ್ದಾಗ ಟಿವಿ ಕಾರ್ಯಕ್ರಮ ನಿರೂಪಣೆಗೂ ಸೈ ಎಂದವರು ಅನಿತಾ ಭಟ್. ಬಿಗ್ ಬಾಸ್ ಮೂಲಕವಾದರೂ ಅವರಿಗೆ ಹೆಚ್ಚು ಅವಕಾಶಗಳು ಹುಡುಕಿಕೊಂಡು ಬರಲಿ.

ಸೃಜನ್ ಲೋಕೇಶ್ : 'ಟಿಪಿಕಲ್ ಕೈಲಾಸ್' ಸೃಜನ್ ಲೋಕೇಶ್ ಅವರ ಇತ್ತೀಚಿನ ಸಿನೆಮಾ. ಸುಬ್ಬಯ್ಯ ನಾಯ್ಡು ಅವರ ಮೊಮ್ಮಗ, ಲೋಕೇಶ್ ಅವರ ಮಗ ಸೃಜನ್ ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ, ಖ್ಯಾತಿ ಗಳಿಸಿದ್ದು 'ಮಜಾ ವಿತ್ ಸೃಜಾ' ರಿಯಾಲಿಟಿ ಶೋ ಮೂಲಕ. ಕನ್ನಡ ಕಿರುತೆರೆಯ ನಂ.1 ಎಂಟರ್ಟೇನರ್ ಎಂಬ ಹೆಗ್ಗಳಿಕೆಗೂ ಅವರಿಗಿದೆ. ಮಾತಿನಲ್ಲಿ ಅಪಾರ ತೂಕದ ಮನುಷ್ಯ ಸೃಜನ್.

RJ ರೋಹಿತ್ : ಉಳಿದವರೆಲ್ಲ ನಟರಾದರೆ ಅರಳು ಹುರಿದಂತೆ ಕನ್ನಡದಲ್ಲಿ ಮಾತನಾಡುವ ರೋಹಿತ್ ರೇಡಿಯೋ ಜಾಕಿಯಾಗಿ ಮನೆಮನೆಯನ್ನು ತಲುಪಿದವರು. ಮಾತಿನ ಮಲ್ಲ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಸದಾ ಜನರ ಸಂಪರ್ಕದಲ್ಲಿಯೇ ಇರುವ RJ ರೋಹಿತ್ ಯಾವುದೇ ಸಂಪರ್ಕವಿಲ್ಲದೆ ಬಿಗ್ ಬಾಸ್ ಮನೆಯಲ್ಲಿ ಇರುವುದೇ ದೊಡ್ಡ ಚಾಲೇಂಜ್ ಎಂದಿದ್ದಾರೆ. ಈ ಚಾಲೇಂಜ್ ಗೆದ್ದು ಬರ್ತಾರಾ?

ಶ್ವೇತಾ ಚೆಂಗಪ್ಪ : ಅರುಂಧತಿ ಧಾರಾವಾಹಿ, ಯಾರಿಗುಂಟು ಯಾರಿಗಿಲ್ಲ ರಿಯಾಲಿಟಿ ಶೋ, ತಂಗಿಗಾಗಿ ಚಲನಚಿತ್ರಗಳ ಮೂಲಕ ನಾಡಿನ ಮನೆಮಾತಾಗಿರುವ ಮುದ್ದುಮುಖದ ಗೃಹಿಣಿ ಶ್ವೇತಾ ಚೆಂಗಪ್ಪ. ಮೌಂಟ್ ಕಾರ್ಮೆಲ್ ಕಾಲೇಜಲ್ಲಿ ಓದಿರುವ ಶ್ವೇತಾ ಹತ್ತನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯನ್ನು ಸೇರಿದ್ದಾರೆ. ಅಲ್ಲಿ ಏನೇನು ಮೋಡಿ ಮಾಡಲಿದ್ದಾರೋ?

ಮಯೂರ್ ಪಟೇಲ್ : ಅಗಾಧ ಪ್ರತಿಭೆ, ಅಪ್ಪ ಮದನ್ ಪಟೇಲ್ ಅವರ ಶ್ರೀರಕ್ಷೆ ಇದ್ದರೂ ಅದೃಷ್ಟದ ಬೆಂಬಲ ಅಷ್ಟು ಸಿಗದ ನಟ 'ಮಣಿ', 'ಯಾರಿವನು', 'ನಿನ್ನದೆ ನೆನಪು' ಖ್ಯಾತಿಯ ಮಯೂರ್ ಪಟೇಲ್. ಇವರು ಬಿಗ್ ಬಾಸ್ ಮನೆಯನ್ನು ಹನ್ನೊಂದನೆಯವರಾಗಿ ಹೊಕ್ಕಿರುವ ಗಟ್ಟಿ ಸ್ಪರ್ಧಾಳು. ಇದೀಗ ತೆಲುಗು ಚಿತ್ರರಂಗದಲ್ಲೂ ಅದೃಷ್ಟ ಅರಸುತ್ತಿದ್ದಾರೆ.

VJ ಅನುಪಮಾ ಭಟ್ : ಮಗು, ಪುಟ್ಟಾ, ಸ್ವೀಟಿ, ಬೇಬಿ ಡಾಲ್, ಕೂಸು ಅಂತೆಲ್ಲ ಮನೆಯಲ್ಲಿ ಕರೆಯಿಸಿಕೊಳ್ಳುವ VJ ಅನುಪಮಾ ಭಟ್ ಮುದ್ದುಮುದ್ದಾಗಿ ನಿರೂಪಣೆ ಮಾಡುತ್ತಾ ಪ್ರೇಕ್ಷಕರ ಮನವನ್ನು ಗೆದ್ದವರು. ಅವರ ಮುಗ್ಧ ವ್ಯಕ್ತಿತ್ವ ಖಡಕ್ ಬಿಗ್ ಬಾಸ್ ಮನೆಯಲ್ಲಿ ಒಗ್ಗುತ್ತದಾ? ಕಾದು ನೋಡಿ. ಡಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿಯೂ ತಮ್ಮ ಚಮಕ್ ತೋರಿಸಿದವರು.

ಆದಿ ಲೋಕೇಶ್ : ಅಗಾಧ ಪ್ರತಿಭೆಯುಳ್ಳು ಮತ್ತೊಂದು ಪ್ರತಿಭೆ ಆದಿ ಲೋಕೇಶ್. ಹಾಸ್ಯ ನಟ ದಿ. ಮೈಸೂರು ಲೋಕೇಶ್ ಅವರ ಮಗ. ಪೂಜಾರಿ, ಬಿಡ್ಡ, ಕಾಮಣ್ಣನ ಮಕ್ಕಳು ಚಿತ್ರಗಳಲ್ಲಿ ಬೊಂಬಾಟ್ ಅಭಿನಯ ತೋರಿದವರು. ನಾಯಕನಿಗಿಂತ ಖಳನಾಯಕನ ಪಾತ್ರದಲ್ಲಿಯೇ ಹೆಚ್ಚಾಗಿ ಮಿಂಚಿರುವ ಆದಿ ಬಿಗ್ ಬಾಸ್ ಮನೆಯನ್ನು ಹೊಕ್ಕಿರುವ 'ಆಂಗ್ರಿ ಯಂಗ್ ಮ್ಯಾನ್'!

ಶಕೀಲಾ : ಇವರ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ದಕ್ಷಿಣ ಭಾರತದಲ್ಲಿ 800ಕ್ಕೂ ಹೆಚ್ಚು ವೈವಿಧ್ಯಮಯ ಚಿತ್ರಗಳಲ್ಲಿ ನಟಿಸಿದ್ದಾರೆ. ಮೋನಾಲಿಸಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಶಕೀಲಾ, ಪಾತರಗಿತ್ತಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪ್ಲಸ್ ಪಾಯಿಂಟ್ ಜನಪ್ರಿಯತೆ, ಮೈನಸ್ ಪಾಯಿಂಟ್ ಕನ್ನಡ ಬಾರದಿರುವುದು.